ಬ್ಯಾಟಿಯುಷ್ಕಫ್, ಕಾನ್ಸ್‍ಟೆನ್‍ಟೈನ್ ನಿಕೊಲ್ಸೇವಿಚ್ 
	1787-1855. ರಷ್ಯದ ಕವಿ ಮತ್ತು ಪ್ರಬಂಧಕಾರ. ರಷ್ಯನ್ ಸಾಹಿತ್ಯದ ಸುವರ್ಣಯುಗದ ಉದಯವನ್ನು ಸೂಚಿಸಿದ ಕವಿಗಳ ಪೈಕಿ ಒಬ್ಬ. ಈತನ ಜೀವನ ಅಷ್ಟೇನೂ ಸಂತೋಷಕರವಾಗಿರಲಿಲ್ಲ. 1822ರಲ್ಲಿ ಹುಚ್ಚು ಹಿಡಿಯಿತು. ಪ್ರಾಚೀನ ಸಾಹಿತ್ಯ ಮತ್ತು ಇಟಲಿಯ ಸಾಹಿತ್ಯಗಳ ಪ್ರಭಾವಕ್ಕೆ ಒಳಗಾದ ಈತ ಜೂ ಕಾಫ್‍ಸ್ಕಿಗಿಂತ ಹೆಚ್ಚಾಗಿ ರೊಮ್ಯಾಂಟಿಕ್ ಮಾರ್ಗಕ್ಕೆ ಸೇರಿದವ. ಕೆಲವು ಭಾವಗೀತೆಗಳು, ಶೋಕ ಗೀತೆಗಳು, ಭಾಷಾಂತರಗಳು ಇವನ ಸಾಹಿತ್ಯ ಸೃಷ್ಟಿ. ಹುಚ್ಚು ಹಿಡಿಯುವ ಮುನ್ನ (1819-21) ಬರೆದ ಭಾವಗೀತೆಗಳಲ್ಲಿ ಇಟಾಲಿಯನ್ ಭಾಷೆಯ ಮಾಧುರ್ಯವಿದೆ. ಇವನ ಗ್ರೀಕ್ ಪ್ರಣಯ ನಾಡುನುಡಿಗಳ ಭಾಷಾಂತರದಲ್ಲಿ ಕಾಣುವ ಲಯ ಮತ್ತು ಕಾವ್ಯ ಸೌಂದರ್ಯ ರಷ್ಯದ ಸಾಹಿತ್ಯಕ್ಕೆ ಹೊಸದಾಗಿದೆ.				(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ